ಕ್ಯಾಕ್ಸ್‍ಟನ್, ವಿಲಿಯಂ
1422-1491. ಇಂಗ್ಲೆಂಡ್ ದೇಶದ ಮೊದಲನೆಯ ಮುದ್ರಣಕಾರ. ಕೆಂಟ್ ಪ್ರಾಂತದಲ್ಲಿ ಜನನ. ರಾಬರ್ಟ್ ಲಾರ್ಜ್ ಎಂಬ ವರ್ತಕನಲ್ಲಿ ಕೆಲಸಕ್ಕೆ ಸೇರಿ (1438) ಆತನ ಮರಣಾನಂತರ(1444) ಯೂರೋಪ್ ದೇಶದ ಉಣ್ಣೆ ವ್ಯಾಪಾರ ಕೇಂದ್ರವಾದ ಬ್ರೂಜಸ್ ಪಟ್ಟಣವನ್ನು ಸೇರಿದ. ಅಲ್ಲಿ 30 ವರ್ಷಕಾಲ ಇಂಗ್ಲಿಷ್ ವಾಣಿಜ್ಯೋದ್ಯಮಿಗಳ ಅಭಿವೃದ್ಧಿಗೋಸ್ಕರ ಶ್ರಮಿಸಿ ಅವರ ಸಂಘಕ್ಕೆ ಗವರ್ನರ್ ಆಗಿ ಚುನಾಯಿಸಲ್ಪಟ್ಟ (1463). ಬರ್ಗಂಡಿ ಪ್ರಾಂತದ ಡಚೆಸ್ ಆಗಿದ್ದ ಮಾರ್ಗರೇಟಳಿಗೆ ಆರ್ಥಿಕ ಸಲಹೆಗಾರನಾಗಿ ನೇಮಕ ಪಡೆದ (1470). ಸಾಹಿತ್ಯದಲ್ಲಿಯೂ ಈತನಿಗೆ ಒಲವು ಇತ್ತು. ಮುದ್ರಣಕಲೆಯನ್ನು ಕ್ಯಾಕ್ಸ್‍ಟನ್ ಕಲಿತದ್ದು ಕೋಲೋನ್ ಪಟ್ಟಣದಲ್ಲಿ. ತರುವಾಯ ಒಂದು ಅಚ್ಚುಕೂಟವನ್ನು ಬ್ರೂಜ್ ಪಟ್ಟಣದಲ್ಲಿ ಕೊಲಾರ್ಡ್ ಮಾನ್‍ಷನ್ನನ ಸಹಾಯದಿಂದ ಸ್ಥಾಪಿಸಿದ (1474). ತಾನೇ ಭಾಷಾಂತರಿಸಿದ್ದ ಒಂದು ಪುಸ್ತಕದ ಇಂಗ್ಲಿಷ್ ಮುದ್ರಣವನ್ನು ಈ ಅಚ್ಚುಕೂಟದಲ್ಲಿ ಪ್ರಥಮವಾಗಿ ಮುದ್ರಿಸಿದ (1475). ಮರುವರ್ಷ (1476) ಇನ್ನೊಂದು ಸ್ವಂತ ಭಾಷಾಂತರ ಗ್ರಂಥವನ್ನು ಮುದ್ರಿಸಿದ. ಇವಲ್ಲದೆ ಇನ್ನೂ 2-3 ಪುಸ್ತಕಗಳನ್ನು ಫ್ರೆಂಚ್ ಭಾಷೆಯಲ್ಲಿ ಸಹ ಮುದ್ರಿಸಿದ ಖ್ಯಾತಿ ಈತನದು. 1476ರ ವರ್ಷಾಂತ್ಯದಲ್ಲಿ ಕ್ಯಾಕ್ಸ್‍ಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ವೆಸ್ಟ್ ಮಿನಿಸ್ಟರ್ ಪಟ್ಟಣದಲ್ಲಿ ಮೊದಲ ಬಾರಿಗೆ ಒಂದು ಅಚ್ಚುಕೂಟವನ್ನು ಸ್ಥಾಪಿಸಿದ. ಕ್ಯಾಕ್ಸ್‍ಟನ್ ತನ್ನ ಜೀವಿತ ಕಾಲದಲ್ಲಿ ಸುಮಾರು 80 ಪುಸ್ತಕಗಳನ್ನು ಮುದ್ರಿಸಿ ಪ್ರಕಟಣೆ ಮಾಡಿದ್ದ. ಇಂಗ್ಲೆಂಡಿನ ಮೊದಲನೆಯ ಚಿತ್ರರಂಜಿತ ಪುಸ್ತಕವನ್ನು ಈತ 1481ರಲ್ಲಿ ಮುದ್ರಿಸಿದ. ಕ್ಯಾಕ್ಸ್‍ಟನ್ನನ ಪುಸ್ತಕಗಳಲ್ಲಿ ಮುಖಪತ್ರಗಳಿರಲಿಲ್ಲ. ಬದಲಾಗಿ ಪೀಠಿಕೆ ಮತ್ತು ಸಮಾಪ್ತಿ ವಿವರಣೆಗಳು ಅಲ್ಲಲ್ಲಿ ಇವೆ. ಇವನು ಹಳೆಕಾಲದ ಬರೆವಣಿಗೆಯನ್ನು ಅನುಕರಿಸುವ ಅಚ್ಚುಮೊಳೆಗಳನ್ನು 4-6 ಗಾತ್ರದಲ್ಲಿ ಮುದ್ರಣಕ್ಕೆ ಉಪಯೋಗಿಸಿದ್ದಾನೆ. ಅವನು ತನ್ನ ಪುಸ್ತಕಗಳಲ್ಲೆಲ್ಲ ತನ್ನ ಹೆಸರಿನ ಮೊದಲನೆಯ ಅಕ್ಷರಗಳಿಂದ W.ಅ ಗಳ ಮಧ್ಯೆ 1474 ಇಸವಿಯನ್ನೂ ಮೇಲೆ ಕೆಳಗೆ ಅಂದವಾದ ಅಂಚುಗಳನ್ನುಳ್ಳ ಒಂದು ಆಕೃತಿಯನ್ನೂ ತನ್ನ ಉದ್ಯೋಗ ಸಂಜ್ಞೆಯಾಗಿ ಉಪಯೋಗಿಸಿದ್ದಾನೆ. ಇಂಗ್ಲೆಂಡಿನಲ್ಲಿ ಮುದ್ರಣ ಕಲೆಯಲ್ಲಿ ಕ್ಯಾಕ್ಸ್‍ಟನ್ ಮೊತ್ತಮೊದಲಿಗನಾದರೂ ಮುದ್ರಣಕಲೆಯ ಅಭಿವೃದ್ಧಿಗಾಗಲಿ ಸುಂದರ ಕೃತಿಗಳನ್ನು ಮುದ್ರಿಸುವ ಕಾರ್ಯಕ್ಕಾಗಲಿ ಆತ ವಿಶೇಷ ಆಸಕ್ತಿ ತೋರಲಿಲ್ಲ. ಮುದ್ರಣಕಾರ್ಯವನ್ನು ಒಂದು ಕಲೆಯೆಂದು ಅವನು ಭಾವಿಸಿದಂತಿಲ್ಲ. ಆದರೂ ಸಾಹಿತ್ಯಕ್ಕಾಗಿ ಹಸಿದ ಜನರಿಗೆ ಇವನ ಮುದ್ರಣಗಳು ಪ್ರಯೋಜನಕಾರಿಯಾದುವು. 

	1485ರಲ್ಲಿ ಕ್ಯಾಕ್ಸ್‍ಟನ್ ಸೊಸೈಟಿ ಎಂಬ ಸಂಘ ಸ್ಥಾಪಿತವಾಯಿತು. ಇದರ ಕೆಲಸ ಲ್ಯಾಟಿನ್ ಮತ್ತು ಆಂಗ್ಲೊ ನಾರ್ಮನ್ನರ ಕಾಲದಲ್ಲಿ ನಡೆದ ಘಟನೆಗಳನ್ನು ಕಾಲಾನುಕ್ರಮವಾಗಿ ಬರೆದು ಪ್ರಕಟಿಸುವ ಮತ್ತು ಜೀವನಚರಿತ್ರೆಗಳನ್ನು ಪ್ರಕಟಿಸುವುದೇ ಆಗಿತ್ತು. 1854ರಲ್ಲಿ ಇದು ಮುಚ್ಚಿಹೋಯಿತು. 					       (ಎಸ್.ಎನ್.ಎಲ್.; ಡಿ.ಎಸ್.ಜಿ.)

ಕ್ಯಾಕ್ಸ್‍ಟನ್ ಮುದ್ರಣವನ್ನು ಇಂಗ್ಲೆಂಡಿಗೆ ತಂದದ್ದರ ಪರಿಣಾಮ ವ್ಯಾಪಕವಾದದ್ದು ಬಹುಮುಖವಾದದ್ದು, ಇದುವರೆಗೆ ಒಬ್ಬರು ಓದಿ ಹಲವರು ಕೇಳುವುದು ರೂಢಿಯಾಗಿತ್ತು. ಈಗ ಒಬ್ಬೊಬ್ಬರು ಒಂದು ಪ್ರತಿಯನ್ನಿಟ್ಟುಕೊಂಡು ತಮ್ಮದೇ ವೇಗದಲ್ಲಿ, ರೀತಿಯಲ್ಲಿ ಓದುವುದು ಪ್ರಾರಂಭವಾಯಿತು. ಇದರಿಂದ ಓದುಗ ವರ್ಗದ ಸ್ವರೂಪವೇ ಬದಲಾಯಿಸಿತು. ಪದಗಳ ಕಾಗುಣಿತ, ಪದಗಳ ಬಳಕೆ ಇವೆಲ್ಲ ಏಕರೂಪಗೊಂಡು ಒಂದು `ಸ್ಟ್ಯಾಂಡರ್ಡ್ ಭಾಷೆ ರೂಪುಗೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಒಂದು ಗದ್ಯ ಶೈಲಿ ರೂಪುಗೊಳ್ಳುವುದಕ್ಕೂ ಮುದ್ರಣ ಕಲೆಯ ಕೊಡುಗೆ ಗಣನೀಯವಾದದ್ದು. 				(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ